ಚಂದ್ರಶೇಖರ್, ಸಿ ಆರ್-
   ಡಾ|| ಸಿ. ಆರ್. ಚಂದ್ರಶೇಖರ್ ಮನೋವೈದ್ಯರಾಗಿ, ಲೇಖಕರಾಗಿ, ಶಿಕ್ಷಕರಾಗಿ ಮತ್ತು ಆಪ್ತ ಸಲಹೆಗಾರರಾಗಿ ಸದಾ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡವರು. ಆರೋಗ್ಯ ಮತ್ತು ಮನೋವೈದ್ಯಕೀಯಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಅತ್ಯಂತ ಸರಳವಾಗಿ, ಸುಂದರವಾಗಿ ಓದುಗರ ಮನಮುಟ್ಟುವಂತೆ ಸಾಹಿತ್ಯ ರಚಿಸುವುದರಲ್ಲಿ ಅಗ್ರಮಾನ್ಯರು. ಬೆಂಗಳೂರು ಜಿಲ್ಲೆಯ ಚನ್ನಪಟ್ಟಣದ ಡಾ|| ಸಿ. ಆರ್. ಸಿ ಯವರು 135 ಪುಸ್ತಕಗಳನ್ನು ರಚಿಸಿದ್ದಾರೆ. ಮೂವತ್ತಕ್ಕೂ ಮಿಕ್ಕಿ ಪುಸ್ತಕಗಳು ಮರುಮುದ್ರಣ ಕಂಡಿವೆ. "ಬಾನಾಮತಿ" ಪುಸ್ತಕ 7 ಮುದ್ರಣ ಕಂಡಿದ್ದರೆ "ನಿಮ್ಮ ಜ್ಞಾಪಕಶಕ್ತಿ ಹೆಚ್ಚಿಸಿಕೊಳ್ಳಿ" ಪುಸ್ತಕ 6 ಮುದ್ರಣ ಕಂಡಿವೆ. ಅಲ್ಲದೆ ತೆಲುಗಿಗೆ ಅನುವಾದಗೊಂಡ ಇವರ ನಾಲ್ಕು ಕೃತಿಗಳು 4 ಮುದ್ರಣಗಳನ್ನು ಕಂಡಿವೆ. ಹತ್ತು ಹಲವು ಪುರಸ್ಕಾರಗಳು ಇವರಿಗೆ ಲಭಿಸಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಡಾ|| ಎನ್. ಎನ್. ಜಯರಾಂ ಪ್ರಶಸ್ತಿ, ಡಾ|| ಎಚ್, ನರಸಿಂಹಯ್ಯ ದತ್ತಿ ಬಹುಮಾನ, ಡಾ|| ಪಿ.ಎನ್. ಶಂಕರ್ ಪ್ರಶಸ್ತಿ ಮುಂತಾದವುಗಳು. ಅಲ್ಲದೇ ಇವೆಲ್ಲಕ್ಕೂ ಗರಿಯಿಟ್ಟಂತೆ ರಾಷ್ಟ್ರೀಯ ವಿಜ್ಞಾನ ಸಂಸ್ಥೆಯ ಪ್ರಶಸ್ತಿಯೂ ಲಭಿಸಿವೆ. ಖ್ಯಾತ ವೈದ್ಯ ಹಾಗೂ ವೈದ್ಯ ಸಾಹಿತಿ ಡಾ|| ಎಚ್.ಡಿ. ಚಂದ್ರಪ್ಪಗೌಡರು ಸಿ.ಆರ್.ಸಿಯವರನ್ನು 'ಲಿವಿಂಗ್ ಲೆಜೆಂಡ್ ಎಂದು ಕರೆದಿರುವುದರಲ್ಲಿ ಅತಿಶಯೋಕ್ತಿಯೇನಿಲ್ಲ.

   12ನೇ ಡಿಸೆಂಬರ್ 1948ರಲ್ಲಿ ಜನಿಸಿದ ಡಾ|| ಸಿ.ಆರ್. ಚಂದ್ರಶೇಖರ್‍ರವರ ತಂದೆಯ ಹೆಸರು ಬಿ.ಎಂ. ರಾಜಣ್ಣಾಚಾರ್ ಮತ್ತು ತಾಯಿಯ ಹೆಸರು ಎನ್. ಪಿ. ಸರೋಜಮ್ಮ. ಎಸ್. ಎಸ್. ಎಲ್. ಸಿ.ಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದು ಎಂ. ಬಿ. ಬಿ. ಎಸ್. ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಪೂರೈಸಿದರು. ಪ್ರಸ್ತುತ ನಿಮ್ಹಾನ್ಸ್‍ನ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥರಾಗಿರುವ ಡಾ|| ಸಿ.ಆರ್.ಸಿ.ಯವರು ಹಲವಾರು ಸಂಘ ಸಂಸ್ಥೆಗಳಲ್ಲಿ ಗೌರವ ಹುದ್ದೆಗಳನ್ನಲಂಕರಿಸಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ವೈದ್ಯ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಸದಸ್ಯತ್ವ ಹೊಂದಿರುವ ಇವರು ರಾಜೀವಗಾಂಧಿ ವೈದ್ಯಾಲಯದ ಪ್ರಸಾರಾಂಗದ ಸಲಹಾ ಸಮಿತಿಯ ಸದಸ್ಯರೂ ಆಗಿದ್ದಾರೆ. ಅಲ್ಲದೇ ವಿಶ್ವ ಆರೋಗ್ಯ ಸಂಸ್ಥೆಯ ಅಲ್ಪಾವಧಿ ತಜ್ಞ ಸಲಹೆಗಾರರಾಗಿ (1991) ಕಾರ್ಯ ನಿರ್ವಹಿಸಿದ್ದಾರೆ. 					(ಡಾ. ವಸುಂಧರಾ ಭೂಪತಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ